ಗುರುವಾರ, ಅಕ್ಟೋಬರ್ 18, 2012

www.facebook.com  ಇದು ನನ್ನ ಮೊದಲ  ಮಿನ್ ಬರಹ.ಮೊದಲಿನಿಂದಲೂ ಶಾಲೆಯಲ್ಲಿ ಸ್ಪರ್ಧೆಗಳಿಗಾಗಿ ಪ್ರಬಂಧವನ್ನು ಬರೆದಿರುವುದು ಬಿಟ್ಟರೆ  ಬರವಣಿಗೆಯಲ್ಲಿ ಅಂತಹ ಅನುಭವವಿಲ್ಲ.ಅದೃಷ್ಟವಶಾತ್ ಪದವಿ ಓದುತ್ತಿರುವಾಗ ಕನ್ನಡದ ಧಾರಾವಾಹಿಗಳಿಗೆ ಸಂಭಾಷಣೆ ಬರೆಯುವ ಅವಕಾಶ ದೊರೆಯಿತು.ಸಂಭಾಷಣೆ ಬರೆಯುವಾಗ ಇರದಿದ್ದ ತುಡಿತ ಸಂಭಾಷಣೆ  ಬರೆಯುವುದನ್ನು ನಿಲ್ಲಿಸಿದ ಮೇಲೆ ಆರಂಭವಾಯಿತು.ತುಡಿತ ಅನ್ನುವುದಕ್ಕಿಂತ ಚಟ ,ಗೀಳು ,ತೆವಲು ಎನ್ನಬಹುದೇನೋ ,ಇರಲಿ ಅದನ್ನ್ನು ನನ್ನ ಬರವಣಿಗೆಯ ಗುಣಮಟ್ಟವನ್ನು ನೋಡಿ ನಿರ್ಧಾರ ಮಾಡಿದರಾಯಿತು.ಶಾಲೆಯಲ್ಲಿ ಸ್ಪರ್ಧೆಗಳಿಗಾಗಿ  ಪ್ರಬಂಧ ಬರೆದಿರುವ ಅನುಭವ ಇದೆಯೆಂದು ಹೇಳಿದ್ದೇನೆ ,ಆ ಎಲ್ಲ ಪ್ರಬಂಧ ಸ್ಪರ್ಧೆಗಳಲ್ಲಿಯೂ ಪ್ರಥಮ ಬಹುಮಾನದಿಂದ ಹಿಡಿದು ಸಮಾಧಾನಕರ ಬಹುಮಾನವನ್ನು ಗಳಿಸಿರುವೆ ಹಾಗಾಗಿ ಸ್ವಲ್ಪ ಮಟ್ಟಿಗೆ ನನ್ನ ಬರವಣಿಗೆಯ ಬಗ್ಗೆ ನನಗೆ ಆತ್ಮವಿಶ್ವಾಸವಿದೆ.
          ಬರವಣಿಗೆಯ ಬಗ್ಗೆ ಆಸಕ್ತಿ ಹುಟ್ಟಲು ಕಾರಣವಾದ  ನಾನು ಸಂಭಾಷಣೆ ಬರೆದ ಧಾರಾವಾಹಿಗಳಿಗೆ ಧನ್ಯವಾದ ಅರ್ಪಿಸಲೇಬೇಕು .ಸಾಹಿತ್ಯ ಓದುವುದರಲ್ಲಿ ಆಸಕ್ತಿ ಇತ್ತು ,ಬರವಣಿಗೆಯ ಕಡೆ ಒಲವಿರಲಿಲ್ಲ.ಈಗ ಆ ಆಸಕ್ತಿ ಬಂದಿದೆ .ಪತ್ರಿಕೆಗಳು,ನಿಯತಕಾಲಿಕೆಗಳಿಗೆ ಬರೆಯಲು ಸಂಕೋಚ,ಹಾಗೂ ಆ ಮಟ್ಟದ ಜ್ಞಾನವೂ ಇಲ್ಲವೆನ್ನಿ.ನಾನು ನಂಬಿರುವ ಪ್ರಕಾರ ಬರವಣಿಗೆಯೆಂದರೆ ಸಂಗೀತದ ಹಾಗಿರಬೇಕು, ಅಂದರೆ ಗಾಯಕನಿಗೆ ಎಷ್ಟರ ತೃಪ್ತಿ ,ಆನಂದವನ್ನು ನೀಡುತ್ತದೆಯೋ ಅಷ್ಟೇ ತೃಪ್ತಿ,ಆನಂದ ,ರಂಜನೆಯನ್ನು ನೀಡಬೇಕು,ಆಗಲೇ ಗಾಯಕನ ಸತ್ವ,ಶ್ರಮ,ಪ್ರತಿಭೆ ಹಾಗೂ ಸಂಗೀತ ಎಲ್ಲವೂ ಸಾರ್ಥಕವಾಗುವುದು .ಬರಹಗಾರಾನಿಗೂ ಅದೇ ರೀತಿಯ ಸಾರ್ಥಕ್ಯ ಸಿಗಬೇಕೆಂದರೆ ಆತನಿಗೆ ತನ್ನ ಬರಹದಿಂದ ಸಿಗುವ ತೃಪ್ತಿ ,ಸಂತೋಷಗಳು ಓದುಗನಿಗೂ ದೊರೆಯಬೇಕು.ಆಗಲೇ ಬರಹಗಾರನ ಸಾಹಿತ್ಯಕ್ಕೊಂದು ಘನತೆಯೋದಗುವುದು.ರಂಜನೆ ಯಾವುದೇ ಬರವಣಿಗೆಯ ಪ್ರಮುಖ ಅಂಶ ಎನ್ನುವುದು ನನ್ನ ಅನಿಸಿಕೆ.ನನ್ನ ಬರಹಗಳು ರಂಜನಾತ್ಮಕವಾಗಿವೆಯೋ ಅಥವಾ ಬೇಸರಾತ್ಮಕವೋ ನೋಡೋಣ.